ಪ್ರಾಣಾಯಾಮ
ಪ್ರಾಣಶಕ್ತಿಯ ನಿಯಂತ್ರಣ. ಪ್ರಾಣವೆಂದರೆ ಪ್ರಧಾನವಾಗಿ ಉಸಿರಾಡುವಿಕೆ. ಆದರೆ ಕೇವಲ ಉಸಿರು ಗಾಳಿ ಹೊರಗಿನ ವಾತಾವರಣದ ವಾಯು ಎಂಬ ಅರ್ಥದಲ್ಲಿ ಮಾತ್ರ ಪ್ರಾಣಶಬ್ದವನ್ನು ಗ್ರಹಿಸಬಾರದು. ಪ್ರಾಣವೆಂದರೆ ಚೇತನ. ಈ ಶಕ್ತಿಯನ್ನು ಶಾಸ್ತ್ರೋಕ್ತ ರೀತಿಯಿಂದ ನಿಯಂತ್ರಿಸುವುದೇ ಪ್ರಾಣಾಯಾಮ. ಬಹಿರಂಗವಾಗಿ ಶ್ವಾಸೋಚ್ಛ್ವಾಸದ ನಿಯಂತ್ರಣವಾದರೆ ಆಂತರಿಕವಾಗಿ ಅನಂತಶಕ್ತಿಸ್ವರೂಪವಾದ ಚೈತನ್ಯದ ನಿಯಂತ್ರಣ ಪ್ರಾಣಾಯಾಮವೆನಿಸುತ್ತದೆ.

	ಪ್ರಾಣಾಯಾಮ ಪತಂಜಲಿ ಮಹರ್ಷಿ ಪ್ರೋಕ್ತವಾದ ಯೋಗದ ಅಷ್ಟಾಂಗಗಳಲ್ಲಿ ಒಂದು. ಇದನ್ನು ರಾಜಯೋಗವೆಂದೂ ಹಠಯೋಗವೆಂದೂ ಕರೆಯುವುದುಂಟು. ಯವ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಗಳೆಂಬವೇ ಈ ಯೋಗದ ಸಕ್ರಮವಾದ ಎಂಟು ಅಂಗಗಳು ಅಥವಾ ಮೆಟ್ಟಿಲುಗಳು. ಒಂದು ಅಂಗವನ್ನು ಸಿದ್ಧಿಸಿಕೊಂಡರೇ ಮುಂದಿನ ಅಂಗಕ್ಕೆ ಆರೋಹಣ. ಈ ಅಷ್ಟಾಂಗಗಳಲ್ಲಿ ಪ್ರಾಣಾಯಾಮ ನಾಲ್ಕನೆಯ ಮೆಟ್ಟಲು. ಯಮನಿಯಮವೆಂಬ ಅಂಗಗಳಿಂದ ಸಾಧಕ (ಯೋಗ ವಿದ್ಯಾರ್ಥಿ) ನೈತಿಕಬಲವನ್ನೂ ಆಸನ, ಪ್ರಾಣಾಯಾಮ, ಪ್ರತ್ಯಾಹಾರಗಳಿಂದ ದೈಹಿಕ ಶಕ್ತಿ ಮತ್ತು ಶಾರೀರಿಕ ಸ್ವಾಸ್ಥ್ಯವನ್ನೂ ಪಡೆದು ಮುಂದಿನ ಧಾರಣ, ಧ್ಯಾನ ಮತ್ತು ಸಮಾಧಿ ಎಂಬ ಅಂಗಗಳಿಂದ ಆತ್ಮಸಾಕ್ಷಾತ್ಕಾರವನ್ನು ಪಡೆಯಬೇಕು.

	ಪ್ರಾಣಾಯಾಮದ ಮುಖ್ಯ ಗುರಿ ಸ್ವಾಸ್ಥ್ಯ. ಇದು ಲೌಕಿಕ ಗುರಿಯಾದರೂ ಇದಕ್ಕೆ ಆಧ್ಯಾತ್ಮಿಕ ಗುರಿಯೂ ಉಂಟು. ಏಕೆಂದರೆ ಆತ್ಮ ಸಾಕ್ಷಾತ್ಕಾರ ಯೋಗದ ಗುರಿಯಾದುದರಿಂದ ಆ ಗುರಿಯ ಸಾಧನೆಗೆ ಶರೀರ ಒಂದು ಸಾಧನ. ಅರೋಗ್ಯ ದೃಢಕಾಯವಿರುವ ವ್ಯಕ್ತಿ ಶರೀರಶುದ್ಧಿಯಿಂದ ಮನಃಶುದ್ಧಿಯನ್ನು ಸಾಧಿಸಿಕೊಳ್ಳಬಲ್ಲ. ಮನಃಶುದ್ಧಿಯಿದ್ದರೆ ಶಾಂತಿ ಲಭ್ಯ. ಆಗಲೇ ಸುಖ. ಅಶಾಂತಸ್ಯ ಕುತಃ ಸುಖಂ ಎಂದು ಭಗವದ್‍ಗೀತೆ ಘೋಷಿಸುತ್ತದೆ. ಅಲ್ಲದೆ ದೇಹ ದೇವನ ಆವಾಸಸ್ಥಾನವೆಂಬುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು. ಆದುದರಿಂದ ಶರೀರಸ್ವಾಸ್ಥ್ಯವಿದ್ದರೆ ಮನಸ್ಸು ಸ್ವಸ್ಥವಾಗಿರುತ್ತದೆ. ಹೀಗೆ ಶರೀರಕ್ಕೂ ಮನಸ್ಸಿಗೂ ನಿಕಟ ಸಂಬಂಧವಿರುವುದರಿಂದ ರಾಜಯೋಗ ಮನಸ್ಸನ್ನು ಸ್ವಾಧೀನಪಡಿಸಿಕೊಳ್ಳುವ ವಿಧಾನವನ್ನು ಬೋಧಿಸುತ್ತದೆ. ಕರ್ಮಯೋಗಕ್ಕೆ ಕ್ರಿಯಾಶಕ್ತಿ, ಭಕ್ತಿಯೋಗಕ್ಕೆ ಭಾವನಾಶಕ್ತಿ ಮತ್ತು ಜ್ಞಾನಯೋಗಕ್ಕೆ ಪ್ರಜ್ಞಾಶಕ್ತಿ ಪ್ರಧಾನವಾಗಿರುವಂತೆ ರಾಜಯೋಗಕ್ಕೆ ಮನಃಶಕ್ತಿ ಪ್ರಧಾನವಾದುದು. ಮನಸ್ಸನ್ನು ಸ್ವಾಧೀನಪಡಿಸಿಕೊಳ್ಳಬೇಕಾದರೆ ಅಂದರೆ ಚಿತ್ತೈಕಾಗ್ರತೆ ಸಿದ್ಧಿಸಬೇಕಾದರೆ ಯೋಗಾಸನ ಮತ್ತು ಪ್ರಾಣಾಯಾಮದ ದಂಡನೆ ಶರೀರಕ್ಕೆ ಆಗಬೇಕಾಗುತ್ತದೆ. ಹೀಗೆ ಪ್ರಾಣಾಯಾಮದ ಉದ್ದೇಶ ಭೌತಿಕ (ದೈಹಿಕ) ಹಾಗೂ ಆಧ್ಯಾತ್ಮಿಕ.

	ಪ್ರಾಣಾಯಾಮವನ್ನು ಕುರಿತು ಪತಂಜಲಿ ಮಹರ್ಷಿಗಳು ಕೆಲವು ಸೂತ್ರಗಳನ್ನು ಕೊಟ್ಟಿದ್ದಾರೆ. ಆದರೆ ಸ್ವಾತ್ಮಾರಾಮರೆಂಬ ಯೋಗಿಗಳು ಸೂರ್ಯಭೇದನ, ಉಜ್ಜಾಯೀ, ಸೀತ್ಕಾರೀ, ಸೀತಲೀ, ಭಸ್ತ್ರಿಕಾ, ಭ್ರಾಮರೀ, ಮೂರ್ಛಾ ಮತ್ತು ಪ್ಲಾವಿನೀ ಎಂಬುದಾಗಿ ಎಂಟು ವಿಧವಾದ ಕುಂಭಕಗಳ (ಪ್ರಾಣಾಯಾಮ) ಹೆಸರನ್ನು ಹೇಳುತ್ತಾರೆ. ಶಂಕರಾಚಾರ್ಯರಂತೂ ಯೋಗದಲ್ಲಿ ಸಾವಿರಾರು ಬಗೆಯ ಕುಂಭಕ (ಪ್ರಾಣಾಯಾಮ)ಗಳಿವೆ, ಆದರೆ ಅವುಗಳಲ್ಲೆಲ್ಲಾ ಕೇವಲ ಕುಂಭಕ ಪ್ರಾಣಾಯಾಮವೇ ಶ್ರೇಷ್ಠವಾದುದು ಎನ್ನುತ್ತಾರೆ. ಗೋರಕ್ಷಸಂಹಿತೆ ಮತ್ತು ಫೇರೆಂಡ ಸಂಹಿತೆಗಳಲ್ಲಿ ಪ್ರಾಣಾಯಾಮಗಳ ಹೆಸರು ಮತ್ತು ವಿವರಗಳು ಬೇರೆಯಾಗಿಯೇ ಉದಾಹೃತವಾಗಿರುವುದರಿಂದ ಇವುಗಳ ವ್ಯಾಪಕತೆಯನ್ನು ನಾವು ಊಹಿಸಬಹುದು.

	ಪ್ರಾಣಾಯಾಮದ ಅಭ್ಯಾಸ ಮಾಡುವವರು ಅದರ ಪೂರ್ವಾಂಗವಾದ ಯೋಗಾಸನಗಳ ಅಭ್ಯಾಸವನ್ನು ಸಿದ್ಧಿಸಿಕೊಂಡಿರಬೇಕೆಂದು ಮೇಲೆ ಸೂಚಿಸಿದೆ. ಇವುಗಳಲ್ಲಿ ಪದ್ಮಾಸನ, ಸ್ವಸ್ತಿಕಾಸನ, ಸಿದ್ಧಾಸನ, ವಜ್ರಾಸನ, ಭದ್ರಾಸನ ಮತ್ತು ವೀರಾಸನಗಳು ಪ್ರಾಣಾಯಾಮಕ್ಕೆ ಉಚಿತಾಸನಗಳು. ಇವುಗಳಲ್ಲದೆ, ಸಾಧಕ ರೇಚಕ(ನಿಶ್ವಾಸ), ಪೂರಕ (ಉಚ್ಛ್ವಾಸ) ಮತ್ತು ಕುಂಭಕ (ಉಚ್ಛ್ವಾಸ ವಾಯುವನ್ನು ಒಳಗೇ ತಡೆದು ಹಿಡಿದುಕೊಳ್ಳುವುದು) ಇವುಗಳ ಕ್ರಮವನ್ನು ಅರಿತುಕೊಂಡು, ಆಯಾ ಕ್ರಿಯೆಗಳನ್ನು ಮಾಡುವಾಗ ಶರೀರದ ಕಂಠಪ್ರದೇಶದಲ್ಲಿ ಜಾಲಂಧರಬಂಧ, ನಾಭಿಪ್ರದೇಶದಲ್ಲಿ ಉಡ್ಡೀಯಾನಬಂಧ ಮತ್ತು ಗುದಪ್ರದೇಶದಲ್ಲಿ ಮೂಲಬಂಧ ಎಂಬ ಬಂಧತ್ರಯಗಳನ್ನೂ ಮಾಡಬೇಕಾಗುತ್ತದೆ. ರೇಚಕದಲ್ಲಿ (ನಿಶ್ವಾಸ) ಉಡ್ಡೀಯಾನಬಂಧವನ್ನೂ ಪೂರಕದಲ್ಲಿ ಜಾಲಂಧರ ಮತ್ತು ಮೂಲಬಂಧವನ್ನೂ ಮಾಡದೆ ಪ್ರಾಣಾಯಾಮದ ಅಭ್ಯಾಸ ಮಾಡಿದರೆ ಶರೀರಕ್ಕೆ ಅಪಾಯ ತಟ್ಟುವ ಸಂಭವವುಂಟು. ಹೀಗೆ ರೇಚಕ, ಪೂರಕ ಮತ್ತು ಕುಂಭಕ ಕ್ರಿಯೆಗಳ ಜೊತೆಜೊತೆಗೇ ಬಂಧತ್ರಯದ ಅಭ್ಯಾಸವನ್ನೂ ಅರಿತೇ ಪ್ರಾಣಾಯಾಮವನ್ನು ಪ್ರಾರಂಭಿಸಬೇಕು.

	ಯೋಗಶಾಸ್ತ್ರರೀತ್ಯ ನಮ್ಮ ಶರೀರದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಿವೆ. ಆರು ಚಕ್ರಗಳಿವೆ. ಪ್ರಕೃತ ಪ್ರಾಣಾಯಾಮಕ್ಕೆ ಸಂಬಂಧಿಸಿದಂತೆ ಇಡಾ (ಮೂಗಿನ ಎಡ ಹೊಳ್ಳೆ. ಇದನ್ನು ಚಂದ್ರನಾಡಿ, ಗಂಗಾ ಎಂತಲೂ ಕರೆಯುತ್ತಾರೆ) ಪಿಂಗಳಾ (ಮೂಗಿನ ಬಲ ಹೊಳ್ಳೆ. ಇದನ್ನು ಸೂರ್ಯನಾಡಿ, ಯಮನಾ ಎಂತಲೂ ಕರೆಯುತ್ತಾರೆ ಮತ್ತು ಸುಷುಮ್ನ (ಬ್ರಹ್ಮರಂದ್ರ, ಬೆನ್ನುಹುರಿ)-ಇವು ಪ್ರಧಾನವಾದುವು.

	ಸಾಧಕ ಶೌಚಸ್ನಾನಾದಿಗಳನ್ನು ಮಾಡಿ ಪ್ರಾತಃಕಾಲ ಮತ್ತು ಸಂಧ್ಯಾಕಾಲಗಳಲ್ಲಿ, ಮೈಮೇಲೆ ಸಾಧ್ಯವಿದ್ದಷ್ಟೂ ಕಡಿಮೆ ಬಟ್ಟೆಯನ್ನು ಧರಿಸಿ, ಜಮಖಾನ, ಕಂಬಳಿ, ಜಿಂಕೆಯ ಚರ್ಮ ಇತ್ಯಾದಿ ಯಾವುದು ದೊರೆಯುವುದೋ ಅದರ ಮೇಲೆ ಕೂತು ಪ್ರಾಣಾಯಾಮ ಮಾಡಬೇಕು. ಮಲಮೂತ್ರ ವಿಸರ್ಜನೆ ಮಾಡದೆ ಅಥವಾ ಹೊಟ್ಟೆಯಲ್ಲಿ ಆಹಾರವಿಟ್ಟುಕೊಂಡು ಇಲ್ಲವೆ ದೇಹ ಸ್ವಾಸ್ಥ್ಯವಿಲ್ಲದಾಗ ಪ್ರಾಣಾಯಾಮಕ್ಕೆ ಕೂರಬಾರದು. ದೇಹದ ನಿಲವು (ನೆಟ್ಟಗೆ ಪದ್ಮಾಸನಾದಿಗಳನ್ನು ಹಾಕಿ ಕೂಡುವುದು) ಕ್ರಿಯೆ (ಉಚ್ಛ್ವಾಸ ನಿಶ್ವಾಸಗಳ ಕಾಲದಲ್ಲಿ ಬಂಧತ್ರಯದ ಆಚರಣೆ) ಮತ್ತು ಭಾವನೆ (ಕಾಮಕ್ರೋಧಾದಿ ಅರಿಷಡ್ವರ್ಗವನ್ನು ತ್ಯಜಿಸಿ ಶಾಂತಮನಸ್ಕನಾಗಿ ಪವಿತ್ರ ಭಾವನೆಯನ್ನಿಟ್ಟುಕೊಳ್ಳುವುದು ಇಲ್ಲವೇ ಇಷ್ಟ ದೇವತಾಧ್ಯಾನ) ಈ ಮೂರು ಮುಖ್ಯಾಂಶಗಳನ್ನು ತಪ್ಪದೆ ಆಚರಿಸುತ್ತಿರಬೇಕು. ಉಚಿತಾಸನದಲ್ಲಿ ಕುಳಿತು ಬಲಗೈ ಹೆಬ್ಬೆರಳು ಮತ್ತು ಮಧ್ಯಮ ಅನಾಮಿಕಗಳಿಂದ ಮೂಗಿನ ಹೊಳ್ಳೆಗಳನ್ನು (ಎಡ-ಇಡ, ಬಲ-ಪಿಂಗಳ) ಅದುಮಿ ಸಾಧ್ಯವಾದಷ್ಟು ಕಾಲ (ಉದಾಹರಣೆಗೆ ನಾಲ್ಕು ಸೆಕೆಂಡು) ಯಾವುದಾದರೊಂದು ಮೂಗಿನ ಹೊಳ್ಳೆಯ ಮೂಲಕ ರೇಚಕ (ನಿಶ್ವಾಸ) ಮಾಡಬೇಕು. ಅನಂತರ ಎರಡು ಸೆಕೆಂಡು ಮೂಗನ್ನು ಪೂರ್ತಿ ಮುಚ್ಚಿ ಹಿಡಿಯಬೇಕು. ಅನಂತರ ಅಷ್ಟೇ ಕಾಲ ಮತ್ತೊಂದು ಹೊಳಲೆಯಿಂದ ಮಾತ್ರ ಪೂರಕ ಮಾಡಿ ಮೂಗನ್ನು ಮುಚ್ಚಿ ಅನಂತರ ಅಷ್ಟೇ ಕಾಲ ಗಾಳಿಯನ್ನು ಒಳಗೆ ತಡೆದು ಹಿಡಿಯಬೇಕು. ಆಮೇಲೆ ಮೊದಲು ಹೇಳಿದಂತೆ ರೇಚಕ ಮಾಡಬೇಕು. ರೇಚಕ, ಪೂರಕ ಮತ್ತು ಕುಂಭಕಗಳ ಕಾಲ ಒಂದೇ ಸಮ ಇದ್ದರೆ ಸಮವೃತ್ತಿ ಪ್ರಾಣಾಯಾಮ. ಹಾಗಿಲ್ಲದೆ ಪೂರಕ ಒಂದು, ಕುಂಭಕ ನಾಲ್ಕು ಮತ್ತು ರೇಚಕ ಎರಡು (1:4:2) ಈ ಪ್ರಮಾಣದಲ್ಲಿದ್ದರೆ ವಿಷಮವೃತ್ತಿ ಪ್ರಾಣಾಯಾಮವೆನಿಸುತ್ತದೆ. ಈ ರೀತಿ ಕಾಲಭೇದ ಮತ್ತು ಇಡಾ, ಪಿಂಗಳಾ ನಾಡಿಗಳಲ್ಲಿ ಪೂರಕ, ರೇಚಕಗಳ ಅದಲು ಬದಲು ಕ್ರಿಯೆಗಳಿಂದ ಅನೇಕ ವಿಧ ಪ್ರಾಣಾಯಾಮಗಳಾಗುತ್ತವೆ. ಕುಂಭಕವಿಲ್ಲದೆಯೂ ಸಹ ಪ್ರಾಣಾಯಾಮ ಮಾಡಬಹುದು. ಇದರ ಆಧುನಿಕ ವ್ಯಾಯಾಮ ವೇಳಾಪಟ್ಟಿಗಳಲ್ಲಿ ಹೇಳುವ ಸಮರ್ಥ ಉಸಿರಾಟದ ಅಭ್ಯಾಸ ಮಾತ್ರ ಆಗುತ್ತದೆ. ಎರಡು ಹೊಳಲೆಗಳಿಂದ ಪೂರಕ-ರೇಚಕ ಮಾಡುವುದು ಅನುಲೋಮ-ವಿಲೋಮವೆಂಬ ಬಗೆಯ ಪ್ರಾಣಾಯಾಮ. ಕುಂಭಕದಲ್ಲೂ (ಉಸಿರನ್ನು ತಡೆದು ಹಿಡಿಯುವುದು) ಅಂತಃಕುಂಭಕ (ಒಳಗೆ ಉಸಿರನ್ನು ತಡೆದು ಹಿಡಿಯುವುದು) ಮತ್ತು ಬಹಿಃಕುಂಭಕ ನಿಶ್ಯ್ವಾಸ (ರೇಚಕ-ವಾದ ಮೇಲೆ ಉಸಿರನ್ನು ತೆಗೆದುಕೊಳ್ಳದಿರುವುದು) ಎಂದು ಎರಡು ಬಗೆ.

	ಪ್ರಾಣಾಯಾಮದ ಪ್ರಯೋಜನ ಅಪರಿಮಿತವಾದುದು. ದೀರ್ಘವಾದ ನಿಶ್ವಾಸ, ಉಚ್ಛ್ಬಾಸಗಳಿಂದ ಶ್ವಾಸಕೋಶಗಳೊಳಗಿನ ರಕ್ತದಲ್ಲಿನ ಇಂಗಾಲಾಮ್ಲ ಸಂಪೂರ್ಣವಾಗಿ ಹೊರಹೋಗಿ ಆ ಸ್ಥಾನದಲ್ಲಿ ಆಮ್ಲಜನಕ ಒದಗಿ ರಕ್ತ ಶುದ್ಧಿಯಾಗುತ್ತದೆ. ಉಸಿರಾಟದ ಅವಯವಗಳಾದ ಮೂಗಿನ ಒಳದ್ವಾರ, ಗಂಟಲು, ಶ್ವಾಸನಾಳ, ಶ್ವಾಸಕೋಶ ತನ್ಮೂಲಕ ಹೃದಯ ಇವುಗಳೆಲ್ಲವೂ ಶುದ್ಧವೂ ಶಕ್ತಿಯುತವು ಆಗುತ್ತವೆ. ಅನುಲೋಮ ವಿಲೋಮವೆಂಬ ಪ್ರಾಣಾಯಾಮ ಅಂದರೆ ಕೇವಲ ಪೂರಕ ರೇಚಕಗಳನ್ನು ಕ್ರಮವಾಗಿ ಪ್ರತಿದಿನ ಸಂಧ್ಯಾಕಾಲಗಳಲ್ಲಿ (ಪ್ರಾತಃಕಾಲ, ಸಂಜೆ) ಮಾಡಿದರೆ ಶ್ವಾಸಕೋಶ, ಹೃದಯ ಮತ್ತು ಉದರಗಳ ಮಾಲಿನ್ಯ ದೂರವಾಗಿ ಸಶಕ್ತವಾಗುತ್ತವೆ. ಕೇವಲ ಎಡಮೂಗು ಹೊಳ್ಳೆಯಿಂದ (ಇಡಾ) ಮಾಡುವ ಅನುಲೋಮ ವಿಲೋಮ ಪ್ರಾಣಾಯಾಮದಿಂದ ಶರೀರದ ಉಷ್ಣಾಂಶ ಕಡಿಮೆಯಾಗಿ ಕಣ್ಣು ಕೈಕಾಲುಗಳ ಉರಿ ಇತ್ಯಾದಿ ಕಡಿಮೆಯಾಗುತ್ತದೆ. ಕೇವಲ ಬಲಮೂಗಿನ ಹೊಳ್ಳೆಯಿಂದ (ಪಿಂಗಳಾ) ಈ ರೀತಿ ಸಮಕಾಲ (ಉದಾಹರಣೆಗೆ ನಾಲ್ಕು ಅಥವಾ ಆರು ಸೆಕೆಂಡು ಅಥವಾ ಅನುಕೂಲವಾದ ಸಮಯಾವಕಾಶ) ರೇಚಕ ಪೂರಕ ಮಾಡಿದರೆ ಸೂರ್ಯಾನುಲೋಮವಾಗುತ್ತದೆ. ಇದರಿಂದ ಶರೀರದ ಶೀತಾಂಶ ಕಡಿಮೆಯಾಗಿ ನೆಗಡಿ, ಶೀತದ ಕೆಮ್ಮು, ಮಂದಾಗ್ನಿ, ಅರೆತಲೆನೋವು ದೂರವಾಗುತ್ತವೆ. ಇದೇ ರೀತಿ ರೇಚಕ ಪೂರಕಗಳನ್ನು ಒಂದೇ ನಾಡಿಯಿಂದ (ಇಡಾ ಅಥವಾ ಪಿಂಗಳಾ) ಮಾಡಿ ಮುಂದೆ ಬದಲಾಯಿಸಿ ಮತ್ತೊಂದು ನಾಡಿಯಿಂದ ಮಾಡಿದರೆ ನಾಡಿಶುದ್ಧಿಕ್ರಿಯೆ ಎಂಬ ಪ್ರಾಣಾಯಾಮವಾಗುತ್ತದೆ. ಮೇಲೆ ಹೇಳಿದ ಅನುಲೋಮ-ವಿಲೋಮ, ಚಂದ್ರಾನುಲೋಮ, ಸೂರ್ಯಾನುಲೋಮ ಮತ್ತು ನಾಡೀಶುದ್ಧಿಕ್ರಿಯೆ ಎಂಬ ಪ್ರಾಣಾಯಾಮಗಳನ್ನು ಕೆಲವಾರು ತಿಂಗಳಾದರೂ ಗುರೂಪದಿಷ್ಟ ಮಾರ್ಗದಲ್ಲಿ ಮಾಡಿದರೆ ಹೃದಯದ ರೋಗ ನಿವಾರಣೆಯಾಗುತ್ತದೆ. ಶ್ವಾಸಕೋಶಗಳಿಗೆ ಧಾರಣಾಶಕ್ತಿಯುಂಟಾಗುತ್ತದೆ. ಉದರದ ಮಾಂಸಖಂಡಗಳಿಗೆ ಒಳ್ಳೆಯ ಶಕ್ತಿ ಬರುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ಅಪಚನ ಮಂದಾಗ್ನಿಗಳು ನಿವಾರಣೆಯಾಗಿ ಹಸಿವು ಹೆಚ್ಚುತ್ತದೆ. ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗಗಳಿಗೆ ಇದು ರಾಮಬಾಣ.

	ದಿನಕ್ಕೆ ಸುಮಾರು ಅರ್ಧ ಘಂಟೆಯವರೆಗಾದರೂ ಪ್ರಾಣಾಯಾಮ ಮಾಡಿದರೆ ನಮ್ಮ ಶರೀರದ ದಮ್ಮು, ಕೆಮ್ಮು, ರಾಜಯಕ್ಷ್ಮ (ಕ್ಷಯ), ಹಿಕ್ಕಾ ಶ್ವಾಸ, ಗಂಟಲ ವ್ಯಾಧಿಗಳು (ಟಾನ್ಸಿಲೈಟಿಸ್, ಡಿಫ್ತೀರಿಯಾ ಒಡಕಲು ಸ್ವರ), ಮಧುಮೇಹ, ಬಹುಮೂತ್ರ, ಸ್ತ್ರೀಯರ ರಕ್ತಪ್ರದರ, ಶ್ವೇತಪ್ರದರ, ಯೋನಿದಾಹ (ಉರಿ), ಚರ್ಮರೋಗಗಳು, ರಕ್ತದ ಒತ್ತಡ ಮುಂತಾದ ಮಹಾ ರೋಗಗಳು ದೂರವಾಗುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಉಸಿರಾಟದ ಸಂಖ್ಯೆಯನ್ನು ಮಿತಿಗೊಳಿಸಿಕೊಂಡುದರಿಂದ ಆಯುಷ್ಯವೃದ್ಧಿಯಾಗುತ್ತದೆ.

	ಭಾರತದ ಸನಾತನ ಋಷಿಗಳು ತಮ್ಮ ತಪೋಬಲದಿಂದ ಅಸಾಧಾರಣ ದೀರ್ಘಾಯುಗಳಾಗಿದ್ದರೆಂಬುದನ್ನು ನಾವು ಕೇಳಿದ್ದೇವೆ. ಆತ್ಮವಿಶ್ವಾಸ ಹಾಗೂ ಆಪ್ತ ವಾಕ್ಯದಲ್ಲಿ ನಂಬುಗೆ ಇಟ್ಟು ಇದನ್ನು ನಿಷ್ಠೆಯಿಂದ ಅವಿರತವಾಗಿ ಅಭ್ಯಾಸ ಮಾಡಿದರೆ ಅದ್ಭುತವಾದ ಪರಿಣಾಮವನ್ನು ಸಾಧಕ ಪಡೆಯಬಹುದು.					  (ಸಿ.ಜಿ.ಪಿ.; ಎಸ್‍ಡಬ್ಲ್ಯೂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ